ಸಂಶೋಧಕರು
ದೇ. ಜವರೇಗೌಡ 1918-2016

ದೇ. ಜವರೇಗೌಡ ಅವರು ಕನ್ನಡದ ಆಧುನಿಕ ಸಂಸ್ಕೃತಿಯನ್ನು ಕಟ್ಟಿದವರಲ್ಲಿ ಒಬ್ಬರು. ಸರಿಸುಮಾರು ಏಳು ದಶಕಗಳಿಂದ ವಿದ್ವತ್ತು, ಆಡಳಿತ ಮತ್ತು ಚಳುವಳಿಗಳೆಂಬ ಮೂರು ನೆಲೆಗಳಲ್ಲಿ ಮಾಡಿರುವ ಕೆಲಸಗಳು ಅವರ ಕೊಡುಗೆಯ ಸ್ವರೂಪವನ್ನು ನಿರ್ಧರಿಸಿವೆ. ಅವರು ಜಾನಪದ, ಗ್ರಂಥಸಂಪಾದನೆ, ಸಾಹಿತ್ಯವಿಮರ್ಶೆ, ಭಾಷಾಮತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸ ಮಾಡಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗಾಗಿ ಹತ್ತಾರು ಮಹತ್ವದ ಯೋಜನೆಗಳನ್ನು ರೂಪಿಸಿದ, ಸಂಪನ್ಮೂಲಗಳನ್ನು ಸೃಷ್ಟಿಸಿದ ಹಾಗೂ ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರ ಸಾಧನೆಯು ಅನುಪಮವಾದುದು. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ, ಅವರು ಕನ್ನಡದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿದ್ದಾರೆ, ನಿವೃತ್ತಿಯ ನಂತರವೂ ಅಂತಹುದೇ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಜವರೇಗೌಡರು, ಈಗ ರಾಮನಗರ ಜಿಲ್ಲೆಗೆ ಸೇರಿರುವ, ಚೆನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದರು. ರಾಷ್ಟ್ರಕವಿ ಕುವೆಂಪು ಅವರ ಅಧ್ಯಾಪನ ಮತ್ತು ಮಾರ್ಗದರ್ಶನಗಳಿಂದ ಪ್ರಭಾವಿತರಾಗಿ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು ಪಡೆದರು. 1946 ರಲ್ಲಿ ಅದೇ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ, ಕನ್ನಡ ಅಧ್ಯಾಪಕರಾಗಿ ನೇಮಕವಾದರು. ಅವರು, ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಕಟಣ ವಿಭಾಗದ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕ, ಪರೀಕ್ಷೆಗಳ ನಿಯಂತ್ರಣಾಧಿಕಾರಿ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮುಂತಾದವು ಅವುಗಳಲ್ಲಿ ಕೆಲವು. ಅವರು 1969 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕವಾಗಿ ತಮ್ಮ ಕನ್ನಡಪರವಾದ ರಚನಾತ್ಮಕ ಚಟುವಟಿಕೆಗಳನ್ನು ಆರು ವರ್ಷಗಳ ಕಾಲ ಮುಂದುವರೆಸಿದರು.(1975)

ದೇಜಗೌ ಅವರು ಪ್ರಾರಂಭಿಸಿದ ಮತ್ತು ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಯೋಜನೆಗಳನ್ನೂ ವಿವರವಾಗಿ ತಿಳಿಸಲು ಈ ಕಿರು ಟಿಪ್ಪಣಿಯಲ್ಲಿ ಸಾಧ್ಯವಾಗುವುದಿಲ್ಲ. ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ-ಕರ್ನಾಟಕ,ಇಂಗ್ಲಿಷ್-ಕನ್ನಡ ನಿಘಂಟು,ಸಮಗ್ರ ಕನ್ನಡ ಸಾಹಿತ್ಯಚರಿತ್ರೆ,ಕನ್ನಡ ಛಂದಸ್ಸಿನ ಇತಿಹಾಸ ಮುಂತಾದ ಕೆಲವು ಮುಖ್ಯವಾದ ಯೋಜನೆಗಳನ್ನು ಇಲ್ಲಿ ಹೆಸರಿಸಬಹುದು. ಕರ್ನಾಟಕಲ್ಲೇ ಮೊದಲಬಾರಿಗೆ ಜಾನಪದ ವಸ್ತುಸಂಗ್ರಹಾಲಯವೊಂದನ್ನು ಸ್ಥಾಪಿಸುವುದಲ್ಲದೆ, ಜಾನಪದ ಅಧ್ಯಯನಕ್ಕೆ ತಳಹದಿಯನ್ನು ರೂಪಿಸಿಕೊಟ್ಟಿದ್ದು ಅವರ ಮುಖ್ಯವಾದ ಸಾಧನೆಗಳಲ್ಲಿ ಒಂದು. ಅವರು ವಿಶ್ವವಿದ್ಯಾಲಯದಲ್ಲಿ ಅನೇಕ ಹೊಸ ವಿಭಾಗಗಳನ್ನು ಪ್ರಾರಂಭಿಸಿದರು. ಈಗಲೂ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮೂಲಕ ಕನ್ನಡಪರವಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಜವರೇಗೌಡರು, ವಿವಿಧ ಪ್ರಕಾರಗಳಲ್ಲಿ 135 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಇಲ್ಲಿ ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಕೃತಿಗಳಿಗೆ ಹೆಚ್ಚಿನ ಗಮನ ಕೊಡಲಾಗಿದೆ.

  1. ಗ್ರಂಥಸಂಪಾದನೆ:

ಅ. ಹರಿಹರನ ಗಿರಿಜಾಕಲ್ಯಾಣ ಮಹಾಪ್ರಬಂಧಂ, 1951

ಆ. ನಯಸೇನನ ಧರ್ಮಾಮೃತ ಸಂಗ್ರಹ, 1957

ಇ. ಲಕ್ಷ್ಮೀಶನ ಜೈಮಿನೀ ಭಾರತ, 1959

ಈ. ಕನಕದಾಸರ ನಳಚರಿತ್ರೆ, 1965

ಉ. ಆಂಡಯ್ಯನ ಕಬ್ಬಿಗರ ಕಾವ, 1964

ಊ. ಚಿಕ್ಕುಪಾಧ್ಯಾಯನ ರುಕ್ಮಾಂಗದ ಚರಿತ್ರೆ, 1982

ಋ. ನೇಮಿಚಂದ್ರನ ಲೀಲಾವತೀ ಪ್ರಬಂಧ, (ಕೆ.ವೆಂಕಟರಾಮಪ್ಪನವರೊಂದಿಗೆ)

  1. ಜಾನಪದ:

ಅ. ಜಾನಪದ ಅಧ್ಯಯನ, 1976

ಆ. ಜಾನಪದ ಸೌಂದರ್ಯ, 1977

ಇ. ಜಾನಪದ ವಾಹಿನಿ, 1983

ಈ. ಜನಪದ ಗೀತಾಂಜಲಿ, 1978, (ಸಂಪಾದಿತ ಕೃತಿ)

  1. ಭಾಷಾಂತರಗಳು

ಅ. ಹಮ್ಮು ಮತ್ತು ಬಿಮ್ಮು, (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜುಡೀಸ್)

ಆ. ನೆನಪು ಕಹಿಯಲ್ಲ, (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್)

ಇ. ಆನಾ ಕೆರಿನಿನಾ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)

ಈ. ಯುದ್ಧ ಮತ್ತು ಶಾಂತಿ, (ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್)

ಉ. ಪುನರುತ್ಥಾನ (ಲಿಯೋ ಟಾಲ್ ಸ್ಟಾಯ್ ಅವರ ರಿಸರೆಕ್ಷನ್)

 

ದೇಜಗೌ ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ತಿರುವನಂತಪುರದ ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್ ಕೊಡುವ ಸೀನಿಯರ್ ಫೆಲೋ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದವು ಇವುಗಳಲ್ಲಿ ಮುಖ್ಯವಾದವು. ಈಚೆಗೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನೃಪತುಂಗ ಪ್ರಶಸ್ತಿಯೂ ಲಭಿಸಿದೆ. ಅವರು 1970 ರಲ್ಲಿ ಬೆಂಗಳೂರಿನಲ್ಲಿ ನಡೆದ ನಲವತ್ತೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂತಃಕರಣ, ರಸಷಷ್ಠಿ, ದೇಜಗೌ-ವ್ಯಕ್ತಿ ಮತ್ತು ಸಾಹಿತ್ಯ, ಅಪೂರ್ವ ಮತ್ತು ನಮ್ಮ ನಾಡೋಜಗಳು ಅವರಿಗೆ ಸಂದಿರುವ ಅಭಿನಂದನ ಗ್ರಂಥಗಳು.

 

ಮುಖಪುಟ / ಸಂಶೋಧಕರು